ಶ್ರಾವಣ ಬಂತು.ಹಬ್ಬಗಳ ಸರಣಿ ಶುರು ಆಯ್ತು.
ಆಷಾಢ ಮುಗಿದು ಇನ್ನೇನು ವರ್ಷಾ ಋತು ಕಾಲಿಡುತ್ತಲಿದೆ. ಮೋಡಗಳು ಕವಿದಿವೆ. ಜಿಟಿ-ಜಿಟಿ ಮಳೆ. ಮೈ ಎಲ್ಲ ಚಳಿ. ಮನೆಯೆಲ್ಲ ಖುಷಿ. ಊರೆಲ್ಲ ಹಸಿರು. ಪೇಟೆಯೆಲ್ಲೆಲ್ಲ ಹೂವು,ಹಣ್ಣು,ತೆಂಗು,ಬತ್ತಿಗಳು,ಬಳೆ,ಬಾಳೆ ಎಲೆ.. ಹಬ್ಬಗಳ ಸರಮಾಲೆಗೆ ಸಜ್ಜು !
ಮೊದಲು ನಾಗರ ಚೌತಿ-ಕಲ್ಲಿನ ನಾಗರಾಜನಿಗೆ ಹಾಲೆರೆದು ಪೂಜೆ.ತಂಬಿಟ್ಟು-ಲಡ್ಡಿಗೆ ಉಂಡಿ ನೈವೇದ್ಯ. ಮರುದಿನ ನಗರ ಪಂಚಮಿ-ಮಣ್ಣಿನ ನಾಗರಾಜನಿಗೆ ಹಾಲೆರೆದು ಪೂಜೆ.ತಂಬಿಟ್ಟು-ಲಡ್ಡಿಗೆ ಉಂಡಿ ನೈವೇದ್ಯ. ಕೆಲವರು ಹುತ್ತಿಗೆ ಹೋಗಿ ಹಾಲೆವರು.ಮರುದಿನ ಷಷ್ಠಿ -ಮಕ್ಕಳ ಹಬ್ಬ. ಜೋಕಾಲಿ , ಅರಳು ಹಿಟ್ಟು !
ಇದಲ್ಲದೆ ಪ್ರತಿ ಶುಕ್ರವಾರ-ಶನಿವಾರ ಶ್ರಾವಣ ಗೌರಿ ಪೂಜೆ. ಸಂಜೆ ಸಂಪತ್ತು ಶುಕ್ರವಾರ, ಶನಿವಾರದ ಹಾಡುಗಳು. ಮನೆ ಮನೆ ಇಂದ ಮತ್ತೈದೆಯರಿಂದ ಗುಂಪಲ್ಲಿ ಹಾಡು. ೪ ನೇ ವಾರದ ಹಾಡು ಮುಗಿಯುವ ಹೊತ್ತಿಗೆ ಮನೆಯೆ ಮಕ್ಕಳಿಗೆ ಹಾಡು ಬಾಯಿ ಪಾಠ !
೨ನೆಯ ಶುಕ್ರವಾರ ವಾರ ಮಹಾಲಕ್ಷ್ಮೀ ಪೂಜೆ. ಮನೆಯಲ್ಲಿ ವಿಶೇಷ ಅಲಂಕಾರ, ಮುತ್ತೈದೆಯರಿಗೆ ಕುಂಕುಮ ಕೊಡುವದು..ಹರಟೆ,ಹಾಡುಗಳು !
ಮುಂದಿನ ದಿನಗಳಲ್ಲಿ ಉಪಾಕರ್ಮ,ರಾಖಿ - ತಂಗಿಯರಿಂದ ಪ್ರೀತಿಯ ಅಣ್ಣ ತಮ್ಮಂದಿರಿಗೆ ರಕ್ಷೆ. ಸಂಬಂಧಗಳ ಗಟ್ಟಿತನ.
ಆಮೇಲೆ ಬರುವದೇ ಗಣೇಶ ಚೌತಿ - ಊರು ತುಂಬೆಲ್ಲ ಹಬ್ಬ. ಗಣೇಶನ ಪ್ರತಿಮೆಗಳ ಬುಕಿಂಗ್-ಬಣ್ಣ ನೋಡುವದು,ಕೂತಿರುವ ಆಸನ, ಇಲಿ,ಹಾವು,ಕಮಲಾ ಇವೆನೋ ಇಲ್ಲವೋ, ಬಲ ಸೊಂಡಿಲು,ಎಡ ಸೊಂಡಿಲು, ಕಿರೀಟ, ಹಿಂದೆ ಪ್ರಭಾವಳಿ,ಚಕ್ರ, ಕಣ್ಣುಗಳು, ಮಡಿಯ ಬಣ್ಣ ನೋಡಿ ಪ್ರತಿಮೆಯ ಬುಕಿಂಗ್. ಡೆಕೋರೇಷನ್ ಗಾಗಿ ಬಣ್ಣದ ಪರಿ-ಪರಿ ಹಾಳೆಗಳು.ಥೆರ್ಮೋಕೋಲ್ ವಿನ್ಯಾಸ. ತೋರಣ. ಹಣ್ಣುಗಳ್ಳನ್ನು ಹುರಿಗೆ ನೇತು ಹಾಕುವದು! ಗಣಪತಿ ಮಾಡದ ಒಳಗೆ ವಿದ್ಯುತ್ ದೀಪ,ಬತ್ತಿಯ ದೀಪ,ಹೊರಗೆ ಬಣ್ಣದ ದೀಪದ ಹಾರ. ಒಳಗೆ ರಂಗೋಲಿ,ಮಣೆ. ಸ್ಥಾಪನೆಗೆ ಸಿದ್ಧ. ಪಟಾಕಿಯ, ಗಂಟೆಯ ನಾದ. 'ಗಣಪತಿ ಬಪ್ಪ ಮಾರಾಯ' ಘೋಷ. ಗಣೇಶನ ಆಗಮನ.ಕರ್ಕಿ(ಗರಿಕೆ),ಪತ್ರೆ,ಬಣ್ಣ ಬಣ್ಣದ ಹೂವುಗಳಿಂದ ಪೂಜೆ.ಪಂಚ ಕಜ್ಜಾಯ,ಮೋದಕ,ಕಡಬು, ಚಕ್ಕಲಿ ನೈವೇದ್ಯ.ಊರಲ್ಲಿ ಕೂಡಿಸಿರುವ ಸಾರ್ವಜನಿಕ ಗಣಪತಿಯ ದರ್ಶನ.ಸ್ಯಮಂತಕ ಮಣಿ ಕಥೆ. ಇದೆ ವಿಜೃಂಭಣೆ .
ಹಲವು ದಿನ. ಕೊನೆಗೆ ವಿಸರ್ಜನೆ.
ಅನಂತನ ಚತುರ್ದಶಿ- ಅನಂತನ ಪೂಜೆ, ದಾರ ಕಟ್ಟಿಕೊಳ್ಳುವದು.
ಇಲ್ಲಿಗೆ ಒಂದು ಹಂತ.. ಮುಂದೆ ೧೫ ದಿನ ಪಕ್ಷ ಮಾಸ. ಪಿತೃಗಳ ಶ್ರಾಧ್ಧ. ಮಕ್ಕಳಿಗೆ ರವೆ ಉಂಡಿ,ಉದ್ದಿನ ವಡೆ ಖುಷಿ.
ಮುಂದೆ ನವರಾತ್ರಿ,ದೀಪಾವಳಿಗಳ ತಯಾರಿಗೆ ರೆಡಿ !