ರಚನೆ : ಶ್ರೀ ವ್ಯಾಸರಾಜರು
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ
ದಾಸರೆಂದರೆ ಪುರಂದರದಾಸರಯ್ಯ || ಪ ||
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದು ತುಲಸಿ ಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬಳಲಿಸುತ
ಕಾಸುಗಳಿಸುವ ಪುರುಷ ಹರಿದಾಸನೇ || 1 ||
ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವ ಪಿತನ ಆಗಮಗಳರಿಯದೇ
ತಂಬೂರಿ ಮೀಟಲವ ಹರಿದಾಸನೇ || 2 ||
ಯಾಯಿವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದ ಲೋಭಿ
ಮಾಯಾ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ || 3 ||
ನೀತಿಯೆಲ್ಲವನರಿತು ನಿಗಮವೇದ್ಯನ
ನಿತ್ಯ ವಾತಸುತನಲ್ಲಿಹನ ವರ್ಣಿಸುತಲಿ
ಗೀತ ನರ್ತನದಿಂದ ಕೃಷ್ಣನ ಪೂಜಿಸುವ
ಪೂತಾತ್ಮ ಪುರಂದರ ದಾಸರಿವರಯ್ಯ || 4 ||